ಕೋಣಾರ್ಕ

	ಭಾರತದ ಒರಿಸ್ಸ ರಾಜ್ಯದ ಪುರಿ ಜಿಲ್ಲೆಯಲ್ಲಿರುವ ಒಂದು ಸ್ಥಳ. ಪುರಿಯಿಂದ ಈಶಾನ್ಯಕ್ಕೆ 32 ಕಿ.ಮೀ.ದೂರದಲ್ಲಿ ಸಮುದ್ರತೀರದಲ್ಲಿದೆ. ಇಲ್ಲಿರುವ ಸೂರ್ಯ ದೇವಾಲಯ ಒಂದು ಅದ್ಭುತ ಕಲಾಕೃತಿ. ವಿಶ್ವದ ಅನೇಕ ಕಲಾವಿಮರ್ಶಕರ ಹೊಗಳಿಕೆಗೆ ಪಾತ್ರವಾಗಿರುವ ಈ ದೇವಾಲಯವನ್ನು ಗಂಗವಂಶದ 1 ನೆಯ ನರಸಿಂಹ ಸು.1238-1284ರ ಕಾಲದಲ್ಲಿ ಕಟ್ಟಿಸಿದ. ವಿಷ್ಣು ಮಹಾರಾಣ ಎಂಬ ಶಿಲ್ಪಿ ಈ ದೇವಾಲಯದ ಸ್ವರೂಪವನ್ನು ಮನಸ್ಸಿನಲ್ಲಿ ಚಿತ್ರಿಸಿಕೊಂಡು ಕಟ್ಟಿದನೆಂದು ಒಂದು ದಂತಕಥೆಯಿದೆ. ಇದರದು ಕಳಿಂಗ ರೇಖಾ ನಾಗರ ಪ್ರಾಸಾದಶೈಲಿ. 24 ಚಕ್ರಗಳಿಂದ ಕೂಡಿದ ಭವ್ಯ ರಥವನ್ನು 7 ಮಹಾ ಬಲಶಾಲಿ ಕುದುರೆಗಳು ಎಳೆಯುತ್ತಿರುವ ಹಾಗೆ ಪೂರ್ವಾಭಿಮುಖವಾಗಿ ಈ ದೇವಾಲಯವನ್ನು ರಚಿಸಲಾಗಿದೆ. ಚುಕ್ಕೆ ಚುಕ್ಕೆಯ, ವಿವಿಧ ಬಣ್ಣಗಳ ಛಾಯೆಗಳುಳ್ಳ, ಬಿಳಿ ಮರಳುಕಲ್ಲು ಮತ್ತು ಕಪ್ಪು ಹಸಿರಿನ ಕ್ಲೋರೈಟ್ ಶಿಷ್ಟ್ ಕಲ್ಲಿನಲ್ಲಿ ದೇವಾಲಯವನ್ನು ಕಟ್ಟಲಾಗಿದೆ. ಸೇವಕರು ಮತ್ತು ಉಷಾ ಪ್ರತ್ಯೂಷರೊಡನೆ ಮಂದಹಾಸದಿಂದ ಕಂಗೊಳಿಸುವ ಸಮಭಂಗದಲ್ಲಿರುವ ದಿವ್ಯ ಸೂರ್ಯನ ಮೂರ್ತಿ ಇದರಲ್ಲಿ ಪ್ರತಿಷ್ಠಿತವಾಗಿದೆ.

	ಈ ದೇವಾಲಯ ಮುಖ್ಯವಾಗಿ 19.70 ಮೀ. ಚದರ ಮತ್ತು ಸು.67 ಳಿ ಮೀ. ಎತ್ತರದ ವಿಮಾನದಿಂದಲೂ ಅದಕ್ಕೆ ಹೊಂದಿಕೊಂಡಂತೆ ಮುಂಭಾಗದಲ್ಲಿರುವ 28.20 ಮೀ. ಚದರ ಮತ್ತು 38 ಮೀ. ಎತ್ತರದ ಜಗಮೋಹನದಿಂದಲೂ ಕೂಡಿದೆ ಮುಂದೆ ಪ್ರತ್ಯೇಕವಾಗಿ ನಟಮಂದಿರವಿದೆ. ಇವೆರಡರ ಮಧ್ಯೆ ಅರುಣಸ್ತಂಭವೂ ಸುತ್ತಲೂ 257 ಮೀ.x 162 ಮೀ. ಪ್ರದೇಶವನ್ನೊಳಗೊಂಡ ಪೌಳಿಗೋಡೆಯೂ ಇವೆ. ಆದರೆ ವಿಮಾನದ ಮೇಲ್ಭಾಗವೂ ನಟಮಂದಿರದ ಮೇಲ್ಚಾವಣಿಯೂ ಬಿದ್ದು ಹೋಗಿವೆ. ಈ ದೇವಸ್ಥಾನ ಪೂರ್ಣಸ್ಥಿತಿಯಲ್ಲಿದ್ದಾಗ ಹೇಗಿದ್ದಿರಬಹುದೆಂಬುದನ್ನು ಇದರ ಭಗ್ನಾವಶೇಷಗಳ ಆಧಾರದ ಮೇಲೆ ಪರ್ಸಿ ಬ್ರೌನ್ ಊಹಿಸಿಕೊಂಡು ಅದನ್ನು ಪುನರ್ರಚಿಸಿದ್ದಾನೆ.

	ದೇವಸ್ಥಾನದ ಹೆಚ್ಚು ಕಡಿಮೆ ಎಲ್ಲ ಭಾಗಗಳಲ್ಲೂ ಬಗೆಬಗೆಯ ರೇಖಾಚಿತ್ರಗಳಿವೆ. ವಿವಿಧ ಭಾವಭಂಗಿಗಳಲ್ಲಿರುವ, ನಾನಾ ಕಾರ್ಯಮಗ್ನರಾಗಿರುವ ಜನರು; ಅರಮನೆಯ, ಜನಸಾಮಾನ್ಯರ ನಿತ್ಯಜೀವನದ ದೃಶ್ಯಗಳು; ನಾಟ್ಯಗಾರರು, ಸಂಗೀತಗಾರರು, ನಾಗ-ನಾಗಿನಿಯರು, ದೇವತೆಯರು; ಆನೆ, ಕುದುರೆ, ಸಿಂಹ, ಜಿರಾಫೆ ಮೊದಲಾದ ಪ್ರಾಣಿಗಳು; ಬೇಟೆ, ಆನೆ ಹಿಡಿಯುವುದು, ವರ್ತಕರ ಬಿಡಾರ, ಅವರು ಅಡಿಗೆ ಮಾಡಿಕೊಳ್ಳುತ್ತಿರುವುದು, ತಾಯಿ-ಮಗು ಪಲ್ಲಕ್ಕಿಯಲ್ಲಿ ಹೋಗುತ್ತಿರುವುದು, ಹಗ್ಗ ಎಳೆಯುವ ಆಟ-ಹೀಗೆ ಅನೇಕ ದೃಶ್ಯಗಳಿವೆ. ಮಿತಾಲಂಕೃತ ಮಾನವರ, ಮುಖ್ಯವಾಗಿ ಸ್ತ್ರೀಯರ, ಹಾವಭಾವಗಳು, ಅಂಗಸೌಷ್ಠವ-ಇವನ್ನೆಲ್ಲ ಎತ್ತಿ ತೋರಿಸುವ ಅತಿಸೂಕ್ಷ್ಮ ಕುಸುರಿ ಕೆತ್ತನೆಯನ್ನಿಲ್ಲಿ ಕಾಣಬಹುದು.						   (ಎ.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ